ಜಾಗುರಿ -
ಮೊರೇಸೀ ಕುಟುಂಬಕ್ಕೆ ಸೇರಿದ ಒಂದು ಕಾಡುಮರ, ಕರ್ನಾಟಕ ಪಶ್ಚಿಮ ಘಟ್ಟಗಳ ನಿತ್ಯ ಹಸಿರಿನ ಕಾಡುಗಳಲ್ಲಿ ಬೆಳೆಯುತ್ತದೆ. ಶ್ರೀಲಂಕಾ, ಬರ್ಮ, ಮಲಯ ಪರ್ಯಾಯ ದ್ವೀಪ ಮತ್ತು ಈಸ್ಟ್ ಇಂಡೀಸುಗಳಲ್ಲೂ ಇದು ಕಾಣದೊರೆಯುತ್ತದೆ. ಅಜ್ಜನಪಟ್ಟೆ, ಬೈರಿ, ವಿಷವೃಕ್ಷ ಪರ್ಯಾಯ ನಾಮಗಳು. ಆ್ಯಂಟಿಯೇರಿಸ್ ಟಾಕ್ಸಿಕೇರಿಯ ಇದರ ಶಾಸ್ತ್ರೀಯ ಹೆಸರು.  80 ಮೀಟರ್‍ಗಳಿಗೂ ಮೀರಿ ಬೆಳೆಯುವ ಬೃಹದ್ಗಾತ್ರದ ಮರ ಇದು. ತೊಗಟೆ ನಯವಾಗಿಯೂ ಬೂದುಮಿಶ್ರಿತ ಕಂದು ಬಣ್ಣದ್ದಾಗಿಯೂ ಇದೆ.  ಇದರ ಒಳಮೈ ನಾರುಮಯ. ಚೇಗುಭಾಗ ಮೃದು ಹಾಗೂ ಬಿಳಿ.  ತೊಗಟೆಯಿಂದ ಒಂದು ರೀತಿಯ ಹಾಲಿನಂಥ ರಸ ಒಸರುತ್ತದೆ.  ಇದು ವಿಷಪೂರಿತವೆಂದು ಹೇಳಲಾಗಿದೆ. ಮಲಯದಲ್ಲಿ ಈ ರಸವನ್ನು ಬಾಣಗಳ ತುದಿಗೆ ಹಚ್ಚುವ ವಿಷವಸ್ತ್ತುವಾಗಿ ಬಳಸುತ್ತಾರೆ.  ಭಾರತದಲ್ಲಿ ಬೆಳೆಯುವ ಮರಗಳಲ್ಲಿ ವಿಷ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಎಲೆಗಳು ಸರಳ, ಪಯರ್Áಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಹೂಗಳು ಏಕಲಿಂಗಿಗಳು. ಕಾಯಿಗಳು ಅಂಜೂರದಂತೆ ಇವೆ.

ಕೊಡಗು, ತಿರುವಾಂಕೂರು ಮತ್ತಿತರ ಪ್ರದೇಶಗಳಲ್ಲಿ ಜಾಗುರಿ ಮರದ ಕೊಂಬೆಗಳನ್ನು ಕಡಿದು, ನೀರಿನಲ್ಲಿ ಕೊಂಚಕಾಲ ಕೊಳೆಹಾಕಿ ಅನಂತರ ಕಲ್ಲಿನ ಮೇಲೆ ಚೆನ್ನಾಗಿ ಬಡಿದು ನಾರನ್ನು ಹೊರತೆಗೆಯುತ್ತಾರೆ. ಇದರಿಂದ ದವಸಧಾನ್ಯಗಳನ್ನು ಹಾಕಿಡುವ ದೊಡ್ಡ ದೊಡ್ಡ ಚೀಲಗಳನ್ನು ತಯಾರಿಸುವುದುಂಟು. ಚೌಬೀನೆ ಬಹಳ ಮೃದುವಾಗಿರುವುದರಿಂದ ಮರಮುಟ್ಟುಗಳಿಗೆ ಇದು ಯೋಗ್ಯವಲ್ಲ.  ತೊಗಟೆಯಿಂದ ಬರುವ ಹಾಲನ್ನು ಹೃದ್ರೋಗ ಹಾಗೂ ರಕ್ತಪರಿಚಲನೆಗೆ ಸಂಬಂಧಪಟ್ಟ ಕಾಯಿಲೆಗಳ ನಿವಾರಣೆಗೆ ಸಣ್ಣ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತದೆ. ಬೀಜಗಳನ್ನು ಜ್ವರ ಮತ್ತು ಆಮಶಂಕೆಗಳ ಚಿಕಿತ್ಸೆಗೆ ಬಳಸುವುದುಂಟು. 
(ಎಸ್.ಎನ್.ಆರ್.; ಎಂ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ